1. ವೇದ ಸುಳ್ಳಾದರೂ ಗಾದೆ ಸುಳ್ಳಾಗದು – ಅರ್ಥ-ವಿವರಣೆ – ವಿಸ್ತರಣೆ – ತಾತ್ಪರ್ಯ – ಕನ್ನಡ ಗಾದೆ (Veda sulladaru gade sullagadu) Kannada Proverb Meaning

ಕನ್ನಡ ಗಾದೆ – ಅರ್ಥ- ವಿವರಣೆ – ವಿಸ್ತರಣೆ – ತಾತ್ಪರ್ಯ (Gade – Kannada Proverb – Artha – Vivarane – Vistharane – Tatparya – Meaning – Explanation in Kannada)

1. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ( Veda sulladaru gade sullagadu )

ಗಾದೆಗಳು ಕನ್ನಡ ಸಾಹಿತ್ಯದ ಅತ್ಯಮೂಲ್ಯ ಆಸ್ತಿ. ಸಾವಿರ ಪದಗಳಲ್ಲಿ ಹೇಳಬಹುದಾದ ವಿಚಾರಗಳನ್ನು ಒಂದು ಗಾದೆ ಹೇಳುತ್ತದೆ. ಅತ್ಯುತ್ತಮವಾದ ಸಹಜ ಗಾದೆಯೊಂದು, ಅದು ಹುಟ್ಟಿದ ಸಮಾಜದ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಧಾರ್ಮಿಕ ಅಂಶಗಳನ್ನು ಗರ್ಭೀಕರಿಸಿಕೊಂಡು ರೂಪುಗೊಂಡಿರುತ್ತದೆ. ಪ್ರತಿಯೊಂದು ಗಾದೆಯೂ ಒಂದು ರೀತಿಯಲ್ಲಿ ಬಿಡಿ ಕವಿತೆ. ಅದರಲ್ಲಿ ಛಂದೋಬದ್ಧತೆ, ಪ್ರಾಸಾನುಪ್ರಾಸ, ಆಲಂಕಾರಿಕ ಅಭಿವ್ಯಕ್ತಿ, ಕಾವ್ಯದ ಬಿಗುಪು, ಬಂಧುರತೆ, ಸೂಚ್ಯಭಾವ, ವ್ಯಂಗ್ಯ ವೈಚಾರಿಕತೆಗಳು ಸಹಜವಾಗಿ ರೂಪುಗೊಂಡಿರುತ್ತವೆ.

ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ, ನಮ್ಮ ಬಾಳನ್ನು ಹಸನುಗೊಳಿಸುತ್ತದೆ. ನಮ್ಮಲ್ಲಿ ಬಹಳ ಜನಪ್ರಿಯ ಗಾದೆಯೊಂದಿದೆ. ಗಾದೆಗಳ ಬಗ್ಗೆಯ ಗಾದೆ ! ಅದೇ “ವೇದ ಸುಳ್ಳಾದರೂ ಗಾದೆ ಸುಳ್ಳಾಗದು”.

ನಮ್ಮ ವೇದಗಳು ಜ್ಞಾನದ ಸಾಗರ. ಏಕೆಂದರೆ ವೇದ ಸೃಷ್ಟಿಸಿದವರು ಪಂಡಿತರು, ಜ್ಞಾನಿಗಳು. ಅವನ್ನು ಅರ್ಥ ಮಾಡಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಗಾದೆಗಳು ಜನಸಾಮಾನ್ಯರು ತಮ್ಮ ದಿನನಿತ್ಯದ ಭಾಷೆಯಲ್ಲಿ ತಮ್ಮ ಅನುಭವದ ಸಾರವನ್ನು ಕಟ್ಟಿಕೊಟ್ಟಿರುವುದು. ವೇದಗಳು ಜ್ಞಾನದಿಂದ ಸೃಷ್ಟಿ ಆಗಿದ್ದರೆ, ಗಾದೆಯು ಅನುಭವದಿಂದ ಹುಟ್ಟು ಪಡೆದದ್ದು ಜೀವನದಲ್ಲಿ ತಮಗೆ ಆದ ಅನುಭವಗಳನ್ನು ವರ್ಣನಾತ್ಮಕ ರೀತಿಯಲ್ಲಿ ಜನರು ಅಂದು ಬಳಸಿದ್ದೆ , ಇಂದು ಗಾದೆಯ ರೂಪ ತಾಳಿ ನಮಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಬಹುದು.

ಹಿಂದೂ ಸಂಸ್ಕೃತಿಯಲ್ಲಿ ವೇದಗಳಿಗೆ ಮಹತ್ತರ ಸ್ಥಾನವಿದೆ. ಇಂತಹ ವೇದಬೇಕಾದರೆ ಸುಳ್ಳಾಗಬಹುದು, ಆದರೆ ಗಾದೆ ಸುಳ್ಳಾಗುವುದಿಲ್ಲ ಎಂದು  ಹೇಳಬೇಕೆಂದರೆ, ಗಾದೆಯಲ್ಲಿ ವೇದಗಳ ಸಾರಗಳಲ್ಲಿ ಇರುವ ನಂಬಿಕೆಗಿಂತ ಹೆಚ್ಚಿನ ನಂಬಿಕೆ ಇದೆ ಎಂದರ್ಥ. ಹೀಗಾಗಿ ಜನಸಾಮಾನ್ಯರಲ್ಲಿ ವೇದಕ್ಕಿಂತ ಗಾದೆಯೇ ಹತ್ತಿರ.

ಇದು “ವೇದ ಸುಳ್ಳಾದರೂ, ಗಾದೆ ಸುಳ್ಳಾಗದು” ಎಂಬ ಗಾದೆಯ ತಾತ್ಪರ್ಯ.

Leave a Comment